ಕೊಲಾಮಿ

ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ವರ್ಧಾ, ಯೋತ್‍ಮಾಲ್, ಅದಿಲಾಬಾದ್ ಮತ್ತು ಮಹಾರಾಷ್ಟ್ರದ ಚಂದ ಮೊದಲಾದ ಜಿಲ್ಲೆಗಳಲ್ಲಿ ಕೊಲಾಮಿಗಳು ಬಳಸುತ್ತಿರುವ ಒಂದು ದ್ರಾವಿಡಭಾಷೆ. 1951ರ ಭಾರತ ಜನಗಣತಿಯ ಪ್ರಕಾರ ಈ ಭಾಷೆಯನ್ನಾಡುವ ಜನಸಂಖ್ಯೆ 45,000. ಇದಕ್ಕೆ ಸಂಬಂಧಿಸಿದಂತೆ ಅನೇಕ ಉಪಭಾಷೆಗಳಿವೆ. ಆದರೆ ಎಷ್ಟು ಉಪಭಾಷೆಗಳಿವೆ, ಎಷ್ಟರಮಟ್ಟಿಗೆ ಕೊಲಾಮಿಯಿಂದ ಅವು ಭಿನ್ನವಾಗಿವೆ ಎಂಬುದನ್ನು ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ ನಿರ್ಧರಿಸಬೇಕಾಗಿದೆ. ದೊರೆತಿರುವ ಸಾಮಗ್ರಿಯಲ್ಲಿ ಅಧಿಕೃತ ಮತ್ತು ಅಧಿಕ ಪರಿಮಾಣದ್ದೆನ್ನಬಹುದಾದುದನ್ನು ವರ್ಧಾ ಜಿಲ್ಲೆಯಿಂದ ಸಂಗ್ರಹಿಸಲಾಗಿದೆ.

ಟಿ.ಬರೊ ಮತ್ತು ಎಮೆನೊ ಅವರ ಕೋಶದಲ್ಲಿ ಅದಿಲಾಬಾದಿನ ಕಿನ್ವತ್‍ನಲ್ಲಿ ಸಂಗ್ರಹಿಸಲಾದ ಕೈಕಿ ಎಂಬ ಭಾಷೆಯನ್ನು ಪ್ರತ್ಯೇಕ ಭಾಷೆಯೆಂದೇ ಹೇಳಲಾಗಿದೆ. ಆದರೆ ಇದನ್ನು ಕೊಲಾಮಿಯ ಉಪಭಾಷೆಯಾದ ನಾಯ್ಕಿ ಎಂದು ಪರಿಗಣಿಸಬೇಕೆಂದು ಈಚಿನ ಸಂಶೋಧನೆಗಳು ತೋರಿಸಿವೆ.

ಕೊಲಾಮಿ ಭಾಷೆಯನ್ನು ನಾಯ್ಕಿ, ಪರ್ಜಿ ಮತ್ತು ಗದಬ ಉಪಭಾಷೆಗಳೊಂದಿಗೆ ಸೇರಿಸಿ ದ್ರಾವಿಡಭಾಷಾ ಪರಿವಾರದಲ್ಲಿ ಉಪಪರಿವಾರವನ್ನಾಗಿ ಮಾಡಿ ಕೊಲಾಮಿ- ಪರ್ಜಿ ಎಂದು ಕರೆದಿದ್ದಾರೆ. ಈ ಭಾಷೆಯಲ್ಲಿ ಕಂಡುಬರುವ ಕೆಲವು ವಿಶಿಷ್ಟ ಲಕ್ಷಣಗಳು ಇವು : (1) ಮೂಲ ದ್ರಾವಿಡಭಾಷೆಯ * ರ >ದ (* > ಜ) ಆಗಿರುವುದು, (2) ನಾಮಪದಗಳಲ್ಲಿ ಬಹುವಚನ ಪ್ರತ್ಯಯಗಳ ಬೆಳೆವಣಿಗೆ ಮತ್ತು (3) 2 ರಿಂದ 4 ರ ವರೆಗಿನ ಸಂಖ್ಯಾವಾಚಿಗಳಲ್ಲಿನ ತ್ರಿಲಿಂಗ ಪದ್ಧತಿ. ಈ ಉಪಪರಿವಾರ ತೆಲುಗು ಭಾಷೆಯನ್ನೊಳಗೊಂಡ ಮಧ್ಯದ್ರಾವಿಡಭಾಷಾ ಗುಂಪಿಗೆ ಸೇರುತ್ತದೆ. ಮೂಲ ದ್ರಾವಿಡದ *ಣ > ನ  ಮತ್ತು * ಳ >ಲ ಗಳ ಪರಿವರ್ತನೆ ಮತ್ತು * ಅವನ್ರು (ದಕ್ಷಿಣ ದ್ರಾವಿಡ ಭಾಷೆಗಳ *ಅವನ್ ರೂಪಕ್ಕೆ ವಿರುದ್ಧವಾದ) ರೂಪದ ನಿರ್ದೇಶಕ ಸರ್ವನಾಮಗಳಲ್ಲಿನ ಪುಲ್ಲಿಂಗ ಏಕವಚನದ ಬೆಳೆವಣಿಗೆಗಳು ಈ ಗುಂಪಿನ ವಿಶಿಷ್ಟ ಲಕ್ಷಣಗಳು. ನಿರ್ದೇಶಕ ಸರ್ವನಾಮದ ಪುಲ್ಲಿಂಗ ಏಕವಚನದ ಈ ರೂಪಗಳೇ ಕೊಲಾಮಿಯ ವಿಶಿಷ್ಟರೂಪಗಳು. ಇದಕ್ಕೆ ಸಂವಾದಿಯಾಗಿ ನಾಯ್ಡಿ ಉಪಭಾಷೆಯು `ಅವೆನ್ದ್ (ಚಿvಟಿಜ ) ಮತ್ತು ಇತರ ಉಪಭಾಷೆಗಳು ವ್ನ್-ಮ್ ಮತ್ತು ಅಮ್ ರೂಪಗಳನ್ನು ಹೊಂದಿವೆ.

ಕೊಲಾಮಿ ಭಾಷೆ ತೆಲುಗು ಮತ್ತು ಮರಾಠಿ ಭಾಷೆಗಳಿಂದ ಸಾಕಷ್ಟು ಶಬ್ದಗಳನ್ನು ಎರವಲು ಪಡೆದಿದೆ. ವರ್ಧಾ ಉಪಭಾಷೆಯಿಂದ ಸಂಗ್ರಹಿಸಿರುವ ಶಬ್ದಗಳಲ್ಲಿ 35% ಭಾಗ ಮರಾಠಿ ಮೂಲದವು.   		(ಎಂ.ಬಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ